ಮಾನವ ಧರ್ಮಕ್ಕೆ ಜಯವಾಗಲಿ! ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. Welcome to Shree Revanasiddeshwara Temple Horti ಸರ್ವೇ ಜನಹ ಸುಖಿನೋ ಭವಂತು !

History

Shree Revanasiddeshwara Temple Horti History

ಸುಕ್ಷೇತ್ರ ಹೊರ್ತಿಯಲ್ಲಿ ಶ್ರೀ ರೇವಣಸಿದ್ಧರ ಪವಾಡಗಳು


ಈ ಕೆಳಗಿನ ಮಾಹಿತಿಯನ್ನು ಎಸ್ ಎಸ್ ಪೂಜಾರಿ ಶಿಕ್ಷಕರು ಸಂಕಲಿಸಿದ ಸುಕ್ಷೇತ್ರ ಹೊರ್ತಿಯಲ್ಲಿ ಶ್ರೀ ರೇವಣಸಿದ್ಧರ ಪವಾಡಗಳು ಎಂಬ ಕಿರು ಹೊತ್ತಿಗೆಇಂದ ಆಯ್ದುಕೊಳ್ಳಲಾಗಿದೆ.
ಸಹಾಯ - ಆರ್ ಎಸ್ ಮಿರಗಿ ಮುಖ್ಯೋಧ್ಯಾಪಕರು, ಶ್ರೀ ರೇವಣಸಿದ್ಧೇಶ್ವರ ಪ್ರಾಥಮಿಕ ಶಾಲೆ ಹೊರ್ತಿ

ಶ್ರೀ ಜಗದ್ಗುರು ರೇಣುಕರ ಲಿಂಗಾವತಾರ


ಪರಶಿವನ ಅಪ್ಪಣೆಯಂತೆ ಶ್ರೀ ರೇಣುಕಾಚಾರ್ಯರು ವಿಶ್ವಶಾಂತಿಗಾಗಿ, ವೀರಶೈವ ಧರ್ಮದ ಸ್ಥಾಪನೆಗಾಗಿ ಭಕ್ತರ ಪರಿಪಾಲನೆಗಾಗಿ ಭೂಲೋಕದಲ್ಲಿ ಸುಕ್ಷೇತ್ರ ಕೊಲ್ಲೀಪಾಕಿ (ಕೊಲನುಪಾಕ - ತೆಲಂಗಣ) Kolanupaka in Nalgonda District, Telangana ಸೋಮನಾಥ ಲಿಂಗದಲ್ಲಿ ಕೋಟಿ ಸೂರ್ಯಪ್ರಕಾಶಮಾನವಾಗಿ ಅವತರಿಸಿದರು. ಭೂಲೋಕದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು 1400 ವರ್ಷಗಳವರಗೆ ಅದರಲ್ಲಿ 700 ವರ್ಷ ಪ್ರಕಾಶಮಾನವಾಗಿ ಕಂಡು ಮತ್ತೆ 700 ವರ್ಷ ರಹಸ್ಯವಾಗಿ ಭಕ್ತರ ಪರಿಪಾಲನೆ ಮಾಡಿ ಅನೇಕ ಅದ್ಭುತ ಲೀಲೆಗಳನ್ನು ತೋರಿಸಿ ಅವತಾರಿ ಪುರುಷನೆಂದು ಮನುಕುಲಕ್ಕೆ ಅರಿವು ಮೂಡಿಸಿದರು. ದ್ವಾಪರ ಯುಗದಲ್ಲಿ ರೇಣುಕಾಚಾರ್ಯರೆಂದು ಕಲಿಯುಗದಲ್ಲಿ ಶ್ರೀ ರೇವಣಸಿದ್ಧರೆಂದು ನಾಮಧರಿಸಿ ಭೂಲೋಕದಲ್ಲಿ ಸಂಚರಿಸಿ ಭೂತಲವನ್ನು ಕೈಲಾಸವನ್ನಾಗಿಸಿದರು.

ದ್ವಾಪರ ಯುಗದಲ್ಲಿ ಶ್ರೀ ರೇಣುಕಾಚಾರ್ಯರು ಅಗಸ್ತ್ಯ ಮುನಿಗಳಿಗೆ ವೀರಶೈವ ಸಿದ್ಧಾಂತವನ್ನು ಬೋಧಿಸಿ ಆತನನ್ನು ಶಿವಯೋಗಿಯನ್ನಾಗಿ, ಸಿದ್ಧಾಂತ ಶಿಖಾಮಣಿಯನ್ನಾಗಿ ಶಿವಜ್ಞಾನದ ಖಣಿಯನ್ನಾಗಿ ಮಾರ್ಪಡಿಸಿದರು. ರಾವಣನ ತಮ್ಮನಾದ ವಿಭೀಷಣನ ಪ್ರಾರ್ಥನೆಯಂತೆ ಶ್ರೀ ರೇಣುಕಾಚಾರ್ಯರು ಮೂರು ಕೋಟಿ ಶಿವಲಿಂಗಗಳನ್ನು ಏಕಕಾಲದಲ್ಲಿ ಮೂರು ಕೋಟಿ ಗುರುಗಳ ರೂಪದಿಂದ ಲಂಕೆಯಲ್ಲಿ ಸ್ಥಾಪನೆಮಾಡಿ ಶ್ರೀಲಂಕಾ ನಗರವನ್ನು ಶಿವಲಿಂಗ ನಗರವನ್ನಾಗಿ ಮಾರ್ಪಡಿಸಿದರು.

ಕಲಿಯುಗದಲ್ಲಿ ಶ್ರೀ ರೇವಣಸಿದ್ಧರು, ಶ್ರೀ ಶಂಕರಾಚಾರ್ಯರಿಗೆ ಚಂದ್ರಮೌಳೇಶ್ವರ ಲಿಂಗವನ್ನು ಅನುಗ್ರಹಿಸಿ ಅವರನ್ನು ವಿಶ್ವ ವಿಖ್ಯಾತರನ್ನಾಗಿ ಮಾಡಿದರು. ಚೋಳರಾಜನು ಸಂತಾನವಿಲ್ಲದೆ ಸದಾ ಚಿಂತಿಸುತ್ತಿರುವಾಗ ಅವನಿಗೆ ಸಂತಾನವನ್ನು ದಯಪಾಲಿಸಿ, ಶಿವ ತತ್ವಗಳನ್ನು ಬೋಧಿಸಿದರು. ಮಾಸೂರಿನ ಶಿವ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ತೊಂದರೆ ಕೊಡುತ್ತಿದ್ದ ಯಕ್ಷ ದಂಪತಿ ರಾಕ್ಷಸರನ್ನು ಸಂಹರಿಸಿ ಮಾಸೂರಿನ ಜೀವದಾನ ನೀಡಿದರು. ಸತ್ಯ, ನ್ಯಾಯ, ನೀತಿಗೆ ಹೆಸರಾದ ಉಜ್ಜೈನಿ ವಿಕ್ರಮಾದಿತ್ಯ ರಾಜನಿಗೆ ವೀರ ಖಡ್ಗವನ್ನು ದಯಪಾಲಿಸಿದರು. ಸಕಲ ಸಂಪತ್ತುಗಳಿಂದ ಮೆರೆಯುತ್ತಿರುವ ಹಾಗೂ ಮಹಾಲಕ್ಷ್ಮೀ ವಾಸವಾಗಿರುವ ಕೊಲ್ಹಾಪುರಕ್ಕೆ ದಯಮಾಡಿಸಿ ಗೋರಕ್ಷಕ ಎಂಬ ಅರಸನ ಅಹಂಕಾರವನ್ನು ದಮನ ಮಾಡಿ, ಅವನನ್ನೂ ಶಿವ ಸಂಪನ್ನನನ್ನಾಗಿ ಮಾಡಿದರು. ಶ್ರೀ ರೇವಣಸಿದ್ಧರ ಆಶೀರ್ವಾದದಿಂದ ಮಾಯಾ ದೇವಿಯ ಉದರದಲ್ಲಿ ಜನಿಸಿದ ರೇವಣಂಬೆಯನ್ನು ಬಿಜ್ಜಳ ರಾಜನು ಅಜೀಯ ಕಡ್ಗದ ಆಸೆಗಾಗಿ ಬಲಿಕೊಡಲು ಸಿದ್ದನಾದಾಗ ಶ್ರೀ ರೇವಣಸಿದ್ಧರು ಆತನ ದುರ್ಗುಣಗಳನ್ನು ಹೋಗಲಾಡಿಸಿ ಕಡ್ಗವನ್ನು ಆತನಿಗೆ ದಯಪಾಲಿಸಿದರು. ಈ ರೀತಿ ಲೋಕಸಂಚಾರಗೈಯುತ್ತಾ ಲೀಲೆಗಳನ್ನು ಮಾಡಿ ಶಿವ ತತ್ವವನ್ನು ಜನರಲ್ಲಿ ಬೀರುತ್ತಾ, ವೀರಶೈವ ಧರ್ಮವನ್ನು ಪರಿಚಯಿಸುತ್ತಾ, ಸಿದ್ದಾಪುರಕ್ಕೆ(ಹೊರ್ತಿಗೆ) ಆಗಮಿಸುವರು.

ಶ್ರೀ ರೇಣುಕರ ಲೋಕ ಸಂಚಾರ( ಸಿದ್ದಾಪುರಕ್ಕೆ ಆಗಮನ)


ಶ್ರೀ ರೇವಣಸಿದ್ಧರು ಲೋಕಸಂಚಾರಗೈಯುತ್ತಾ ಲೀಲೆಗಳನ್ನು ಮಾಡಿ ಶಿವ ತತ್ವವನ್ನು ಜನರಲ್ಲಿ ಬೀರುತ್ತಾ ಸಿದ್ದಾಪುರಕ್ಕೆ(ಹೊರ್ತಿಗೆ) ಆಗಮಿಸುವರು. ಅಂದು ಸಿದ್ದಾಪುರದಲ್ಲಿ ನವಕೋಟಿ ಸಿದ್ದರಿಗೆ ಕಿರುಕುಳ ಕೊಡುತ್ತಿದ್ದ ಆದಿ ಮಾಯೆಯ(ಮಾಳಮ್ಮ) ಗರ್ವಹರಣ ಮಾಡಿ ಸಿದ್ದರನ್ನು ಮುಕ್ತಿಗೊಳಿಸಿದರು. ಕೇವಲ ದುಷ್ಟರನ್ನು ಸಂಹರಿಸಿದರಲ್ಲದೆ ಪರಮ ಭಕ್ತರ ಉದ್ಧಾರವನ್ನೂ ಮಾಡಿದರು. ತೇಲಿಗರ ಅಜ್ಜಮ್ಮಳನ್ನು ಹಾಗೂ ಮಹಾ ಶಿವಭಕ್ತ ಹಂಚಿನಾಳ ಬಸಪ್ಪನ ಭಕ್ತಿಗೆ ಮೆಚ್ಚಿ ಅವರನ್ನು ಹರಿಸಿದರು.

ಅಂದು ಸಿದ್ದಾಪುರ ಎಂದು ಖ್ಯಾತಿ ಪಡೆದ ಗ್ರಾಮವೇ ಇಂದಿನ ಸುಕ್ಷೇತ್ರ ಹೊರ್ತಿಯಾಗಿದೆ. ಶ್ರೀ ರೇವಣಸಿದ್ಧರ ಮನಸನ್ನು ಸೂರೆಗೈದು ತಫೊಭೂಮಿಯೆನಿಸಿರುವ ಸುಕ್ಷೇತ್ರ ಹೊರ್ತಿ ಗ್ರಾಮವು ಕರ್ನಾಟಕದ ಉತ್ತರ ಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿ 13 ರ ಮೇಲಿದ್ದು ಭಕ್ತರ ಮೋಕ್ಷ ಸ್ಥಳವಾಗಿ, ವಾಣಿಜ್ಯ ವ್ಯವಹಾರಗಳ ನಗರವಾಗಿ ದಾಪುಗಾಲಿಡುತ್ತಿದೆ.

ಆದಿ ಮಾಯೆ ಮಾಳಮ್ಮಳ ಗರ್ವಹರಣ


ಸಿದ್ದಾಪುರದಲ್ಲಿ(ಹೊರ್ತಿ) ಆದಿಮಾಯೆ ಮಾಳಮ್ಮ ಸಿದ್ದರಿಗೆ ನಾನಾ ರೀತಿಯಲ್ಲಿ ಹಿಂಸಿಸುತಿದ್ದ ವಿಷಯ, ರೇವಣಸಿದ್ಧರು ಇಂಗಳೇಶ್ವರದ ಗವಿಯಲ್ಲಿ ತಪೋಗೈಯುವಾಗ ಜ್ಞಾನ ದೃಷ್ಟಿಯಿಂದ ತಿಳಿದುಕೊಂಡು ಸಿದ್ದರ ಮುಕ್ತಿಗಾಗಿ ಸಿದ್ದಾಪುರಕ್ಕೆ(ಹೊರ್ತಿ) ಆಗಮಿಸಿದರು. ಸಿದ್ದಾಪುರವು ಸುಂದರವಾದ ರಮಣೀಯ ಸೂಕ್ಷೇತ್ರವಾಗಿತ್ತು, ಇಂತಹ ರಮ್ಯವಾದ ಸ್ಥಳದಲ್ಲಿ ವಾಸಿಸುವ ಜನರು ಪುಣ್ಯವಂತರು ಹಾಗೂ ಭಾಗ್ಯವಂತರೂ ಹೌದು. ಈ ಪುಣ್ಯಸ್ಥಾನದಲ್ಲಿ ವ್ಯತಿರಿಕ್ತವೆಂಬಂತೆ ಆದಿಮಾಯೆ ಮಾಳಮ್ಮ ಸಿದ್ದರಿಗೆ ದಿನನಿತ್ಯ ಕೊಡುತ್ತಿದ್ದ ಹಿಂಸೆ, ತೊಂದರೆಗೆ ಬೇಸತ್ತು ಸಿದ್ದರೆಲ್ಲರೂ ತಮ್ಮ ತೊಂದರೆಗಳನ್ನು ಶ್ರೀ ರೇವಣಸಿದ್ಧರ ಬಳಿ ತೋಡಿಕೊಳ್ಳುತ್ತಾರೆ. ಆಗ ರೇವಣಸಿದ್ಧರು ತಮ್ಮ ದಿವ್ಯ ಶಕ್ತಿಯ ಅರಿವು ಮೂಡಿಸಲು ಆದಿಮಾಯೆಯ ವಿಷದ ಸ್ತನವನ್ನು ಕೊಯ್ದು, ಮಾಯೆಯ ಗರ್ವಹರಣ ಮಾಡಿ ಸಿದ್ದರನ್ನು ಕಾಪಾಡಿದರು.

ಮಾಳಮ್ಮನಲ್ಲಿ ನೆಲೆಯೂರಿದ್ದ ಅಹಂಕಾರ ಮತ್ತು ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೊಡಿಸಿ ಆಕೆಗೆ ಶಿವತತ್ವವನ್ನು ಬೋಧಿಸಿ ಆಕೆಗೆ ದೇವಿಯ ರೂಪವನ್ನು ತಂದುಕೊಟ್ಟು, ಭಕ್ತರ ಅಪೇಕ್ಷೆಗಳನ್ನು ದಯಪಾಲಿಸುವ ದೇವಿಯಾಗಿ ಇಂದು ಬೆಟ್ಟದ ತುದಿಯಲ್ಲಿ ನೆಲಿಸಿದ್ದಾಳೆ. ಪ್ರತಿವರುಷ ರೇವತಿ ನಕ್ಷತ್ರದಂದು ಶ್ರೀ ರೇವಣಸಿದ್ಧರು ಮಾಳಮ್ಮಳಿಗೆ ದರುಶನ ಕೊಡಲು, ಮಾಳಮ್ಮಳ ಬೆಟ್ಟಕ್ಕೆ ಅಪಾರ ಭಕ್ತಸಮೂಹದೊಂದಿಗೆ ಪಲ್ಲಕ್ಕಿ, ನಂದಿಕೋಲು ಉತ್ಸವದೊಂದಿಗೆ ಹೋಗುವದು ವಾಡಿಕೆಯಿದೆ.

ತೇಲಿಗರ ಅಜ್ಜಮ್ಮಳ ವಂಶೋದ್ದಾರ


ಶ್ರೀ ರೇವಣಸಿದ್ಧರು ಪ್ರಕೃತಿ ಮಡಿಲಲ್ಲಿ ನೆಲೆಸಿರುವ ಸಿದ್ದಾಪುರದ ಸುಂದರ ಬನವನ್ನು ದಾಟುತ್ತ ಬರುವ ಮಾರ್ಗದಲ್ಲಿ, ದನಗಾಯಿಗಳು ದನಗಳನ್ನು ಮೇಯಲು ಬಿಟ್ಟು ಸಂತೋಷದಿಂದ ಆಟವಾಡುತ್ತಿದ್ದರು. ಶ್ರೀ ರೇವಣಸಿದ್ಧರು ತಮ್ಮ ನಿಜ ರೂಪವನ್ನು ಮರೆಮಾಚಿ ಭಿಕ್ಷುಕ ವೇಷದಿಂದ ಬಾಲಕರ ಬಳಿಗೆ ಬಂದು "ಬಾಲಕರೇ, ನನಗೆ ಹಸಿವಾಗಿದೆ, ಈ ಭಿಕ್ಷುಕನಿಗೆ ತಿನ್ನಲು ಏನಾದರೂ ಕೊಡುವಿರಾ?", ಆಗ ಬಾಲಕರು ತಮ್ಮೊಳಗೆ ಮಾತನಾಡುತ್ತಾ, ಇವರಿಗೆ ಏನಾದರು ಕೊಡಲು ನಮ್ಮ ಬಳಿ ಏನೂ ಇಲ್ಲ, ಬುತ್ತಿಯು ಖಾಲಿಯಾಗಿದೆ. ಅವರು ಅಸಹಾಯಕರಾಗಿ ಹೀಗೆ ಹೇಳುತ್ತಾರೆ - "ಆಗೋ ಅಲ್ಲಿ ಕಾಣುವ ಊರು ನಮ್ಮೂರು ಸಿದ್ದಾಪುರ(ಹೊರ್ತಿ), ದಾನ, ಧರ್ಮ ಹಾಗೂ ಹಸಿದ ಭಿಕ್ಷುಕರಿಗೆ ಅನ್ನ ನೀಡುವ ಅನ್ನದಾನಿಯೆಂದು ಹೆಸರುಗಳಿಸಿದ ಶ್ರೇಷ್ಠ ಶಿವಭಕ್ತಳಾದ ತೇಲಿಗರ ಅಜ್ಜಮ್ಮಳ ಮನೆಗೆ ಹೋದರೆ ನಿಮ್ಮ ಹಸಿವು ಹಿಂಗಿಸಬಹುದು.

ಅಜ್ಜಮ್ಮಳಿಗೆ ಮಲ್ಲಿಕಾರ್ಜುನನೆಂಬ ಮಗನಿದ್ದನು, ಗಾಣದಿಂದ ತೆಗೆದ ಎಣ್ಣೆಯನ್ನು ಮಾರಿ ಜೀವನ ನಡಿಸುತ್ತಿದ್ದರು. ಅಜ್ಜಮ್ಮಳ ಜೀವನ ಬಹಳ ಕಡುಬಡತನದಿಂದ ಕೂಡಿದ್ದು, ಕೆಲವೊಮ್ಮೆ ಗಂಜಿಗೂ ಪರಿತಪಿಸಬೇಕಾಗಿತ್ತು. ಶ್ರೀ ರೇವಣಸಿದ್ಧರು, ಅಜ್ಜಮ್ಮಳನ್ನು ಪರೀಕ್ಷಿಸಲು ಭಿಕ್ಷುಕ ವೇಷಧಾರಿಯಾಗಿ ಶಿವ ಶಿವಾ "ಭವತಿ ಭಿಕ್ಷಾಂದೇಹಿ" ಎಂದು ಆ ಕಡು ಬಡವಳ ಮನೆಮುಂದೆ ನಿಂತರು. ಆ ಭಿಕ್ಷುಕನ ವಾಣಿಯನ್ನು ಕೇಳಿ ಪವಿತ್ರ ಭಾವನೆಯಿಂದ, ನಿರ್ಮಲ ಭಕ್ತಿಯಿಂದ ಅವರಿಗೆ ಗಂಜಿಯನ್ನು ಉಣಬಡಿಸುತ್ತಾಳೆ. ಈ ದೀನರ ಭಕ್ತಿಗೆ ಮೆಚ್ಚಿ ಹರ್ಷಿತರಾದ ಸಿದ್ದರು ಅವರ ದಾರಿದ್ರ್ಯವನ್ನು ನಿವಾರಿಸಲು ಸಂಕಲ್ಪ ಮಾಡಿದರು. ಕೆಲವು ತಿಂಗಳುಗಳಲ್ಲಿ ಅಜ್ಜಮ್ಮನ ಮನೆಯಲ್ಲಿ ಸಿರಿ ಸಂಪತ್ತು ಉಕ್ಕಿಹರಿಯಿತು.

ಹೀಗೆ ಅಜ್ಜಮ್ಮಳ ಭಕ್ತಿಗೆ ಮೆಚ್ಚಿ ಅವಳ ವಂಶೋದ್ಧಾರಮಾಡಿದ ಸಿದ್ದರ ಪವಾಡಕ್ಕೆ ಸಿದ್ದಾಪುರದ ಜನರು ಮಾರುಹೋಗಿ, ಸುಂದರ ಪ್ರಶಾಂತವಾದ ಬನದಲ್ಲಿ ತಾಪೋಗೈಯುತ್ತಿದ್ದ ರೇವಣಸಿದ್ಧರ ದರುಶನ ಪಡಿಯುತ್ತಾರೆ. ಅಜ್ಜಮ್ಮಳು ಪ್ರತಿದಿನ ಬನಕ್ಕೆ ಹೋಗಿ ರೇವಣಸಿದ್ಧರಿಗೆ ಪ್ರಸಾದವನ್ನು ನೀಡುತ್ತಿದ್ದಳು, ಹೀಗಿರುವಾಗ ಒಂದು ದಿನ ಧಾರಾಕಾರವಾಗಿ ಸುರಿದ ಮಳೆಯಿಂದ ಹಳ್ಳವು ತುಂಬಿಹರಿಯತೊಡಗಿತು, ಅಜ್ಜಮ್ಮಳು ಹಳ್ಳ ದಾಟಲಾಗದೆ ರೇವಣಸಿದ್ಧರ ದರುಶನ ಪಡೆಯಲಾಗಲಿಲ್ಲ. ಅಪಾರ ಭಕ್ತಿಯನ್ನು ಹೊಂದಿದ ಅಜ್ಜಮ್ಮಳಿಗೆ ದರುಶನ ಪಡಿಯದೆ ಮನೆಗೆ ಮರಳಲು ಇಷ್ಟವಾಗದೆ, ಹಳ್ಳದ ದಡದಲ್ಲಿ ಮಲಗುತ್ತಾಳೆ. ಶ್ರೀ ರೇವಣಸಿದ್ಧರು ಅಜ್ಜಮ್ಮಳ ಸ್ವಪ್ನದಲ್ಲಿ ಬಂದು "ಅಮ್ಮ ನೀನು ಇನ್ನುಮುಂದೆ ನನ್ನ ದರುಶನಕ್ಕೆ ಭದ್ರಗಿರಿಯ ಆಶ್ರಮಕ್ಕೆ ಬರುವ ಅವಶ್ಯಕತೆಯಿಲ್ಲ, ನಿನ್ನ ಮನೆಯ ಗಾಣದ ಸ್ಥಳದಲ್ಲಿ ಪ್ರತ್ಯಕ್ಷ್ಯನಾಗಿ ನಿನಗೆ ದರುಶನ ನೀಡುತ್ತೇನೆಂದು ಹೇಳಿದರು. ಅಜ್ಜಮ್ಮಳು ಹರ್ಷಗೊಂಡು ಮನೆಗೆ ಹೋದಳು. ಈ ಮೊದಲು ಅಜ್ಜಮ್ಮಳ ಕನಸಿನಂತೆ, ರೇವಣಸಿದ್ಧರು ಗಾಣದಲ್ಲಿ ಪ್ರತ್ಯಕ್ಷ್ಯರಾಗಿ, ವೃದ್ಯೆಗೆ ದರುಶನ ನೀಡಿದರು. ಅದುವೆ ಇಂದು ಊರಿನ ಮಧ್ಯಭಾಗದಲ್ಲಿ ಸುಂದರವಾದ ಹಾಗೂ ಭವ್ಯವಾದ ದೇವಾಲಯ ನಿರ್ಮಾಣಗೊಂಡು ಅನೇಕ ಭಕ್ತಾದಿಗಳಿಗೆ ಮೋಕ್ಷ ಸ್ಥಳವಾಗಿ ಪರಿಣಮಿಸಿದೆ.

ಹಂಚನಾಳ ಬಸಪ್ಪನು ಮೋಕ್ಷೆ ಪಡೆದಿದ್ದು


ಪವಿತ್ರವಾದ ಶ್ರಾವಣ ಮಾಸದಲ್ಲಿ ಶ್ರೀ ರೇವಣಸಿದ್ಧರ ಪುಣ್ಯ ಭೂಮಿಯಾದ ಹೊರ್ತಿ ಗ್ರಾಮದಲ್ಲಿ ರೇವಣಸಿದ್ಧರ ಉತ್ಸವವು ಒಳ್ಳೆಯ ವಿಜೃಂಭಣೆಯಿಂದ ನಡೆಯುತ್ತಾ ಬಂದಿರುವದು ಬಹು ದಿನಗಳ ವಾಡಿಕೆಯಾಗಿದೆ. ಅನೇಕ ಭಕ್ತಾದಿಗಳು ಮಡಿಯಿಂದ ದೇವರಿಗೆ ನೈವೇದ್ಯ ಹಾಗೂ ಕಾಯಿ ಕರ್ಪೂರದೊಂದಿಗೆ ತಮ್ಮ ಭಕ್ತಿಯ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಹಂಚಿನಾಳ ಬಸಪ್ಪನು ಶ್ರೀ ರೇವಣಸಿದ್ಧರ ಪರಮ ಭಕ್ತರು ಹಾಗೂ ಕಾಯಕಯೋಗಿ, ಪರಿಶುದ್ಧವಾದ ಮನಸುಳ್ಳವರಾಗಿದ್ದರು.

ಹಂಚಿನಾಳ ಎಂಬುವದು ಒಂದು ಚಿಕ್ಕ ಹಳ್ಳಿ. ವಿಜಾಪುರ ಪಟ್ಟಣದಿಂದ ಸುಮಾರು 15 KM ಹಾಗೂ ಹೊರ್ತಿಯಿಂದ 20 KM ಅಂತರದಲ್ಲಿದೆ. ಈ ಗ್ರಾಮವು ಭಕ್ತಿಯ ಬೀಡಾಗಿತ್ತು ಎಂಬುದಕ್ಕೆ ಅಲ್ಲಿಯ ಪರಮ ಭಕ್ತ ಬಸಪ್ಪನವರ ಚರಿತ್ರೆಯೇ ಸಾಕ್ಷಿ. ಪ್ರತಿವರ್ಷ ಶ್ರಾವಣ ಮಾಸದ ಸೋಮವಾರದಂದು ಹಂಚಿನಾಳ ಗ್ರಾಮದಿಂದ ಮಡಿಯಿಂದ ಭಕ್ತಿಯ ಭಾವದೊಂದಿಗೆ ಕಾಲುನಡಿಗೆಯಿಂದ ಶ್ರೀ ರೇವಣಸಿದ್ಧರಿಗೆ ನೈವೇದ್ಯವನ್ನು ತರುತ್ತಿದ್ದನು. ಬಸಪ್ಪನ ನೈವೇದ್ಯ ಬಂದ ನಂತರವೇ ಹೊರ್ತಿಯಲ್ಲಿ ಶ್ರೀ ರೇವಣಸಿದ್ಧರ ಉತ್ಸವ ನೆರವೇರುತ್ತಿತ್ತು.

ಈ ಮಹಾಭಕ್ತ ಶರಣಬಸಪ್ಪನು ಒಮ್ಮೆ ಶ್ರಾವಣ ಮಾಸದ ಮೂರನೆಯ ಸೋಮವಾರದಂದು ರೇವಣಸಿದ್ಧರಿಗೆ ನೈವೇದ್ಯ ತರುವಾಗ ಮಾರ್ಗಮಧ್ಯದಲ್ಲಿ ಸುಸ್ತಾಗಿ, ಭಕ್ತಿಯ ಆವೇಶದಲ್ಲಿ ಮೂರ್ಛೆ ಹೋದರು. ಇತ್ತ ಹೊರ್ತಿಯಲ್ಲಿ ಭಕ್ತರೆಲ್ಲರೂ ಬಸಪ್ಪನ ನೈವೇದ್ಯೆಗಾಗಿ ಕಾಯುತ್ತಿದ್ದರು, ವಾಡಿಕೆಯಂತೆ ಪ್ರತಿ ಸೋಮವಾರ ಗ್ರಾಮದ ಮಧ್ಯಭಾಗದಲ್ಲಿರುವ ಹೊಸ ದೇವಾಲಯದಿಂದ ಉತ್ಸವ ಆರಂಭಗೊಂಡು ಮಾಳಮ್ಮಳಿಗೆ ದರ್ಶನವಿತ್ತು ಪ್ರಾಚೀನ ದೇವಾಲಯಕ್ಕೆ ಬರುತ್ತಿತ್ತು. ಆದರೆ ಮೂರನೆಯ ಶ್ರಾವಣ ಸೋಮವಾರ ದಿವಸ ಶ್ರೀ ರೇವಣಸಿದ್ಧರ ಉತ್ಸವ ವಾಡಿಕೆಯಂತೆ ಪ್ರಾಚೀನ ದೇವಾಲಯಕ್ಕೆ ಬಾರದೆ ನೇರವಾಗಿ ಓಡುತ್ತಾ ಪರಮಭಕ್ತ ಬಸಪ್ಪನು ಮೂರ್ಛೆಹೋದ ಸ್ಥಳಕ್ಕೆ ಧಾವಿಸಿತು. ಬಸಪ್ಪನು ಶ್ರೀ ರೇವಣಸಿದ್ಧರ ಉತ್ಸವವನ್ನು ಕಣ್ತುಂಬ ನೋಡಿ ಆನಂದಪಟ್ಟರು. ದರ್ಶನದಿಂದ ಪುನೀತನಾದ ಬಸಪ್ಪನು ಅದೇ ಸ್ಥಳದಲ್ಲಿ ತಮ್ಮ ಇಚ್ಚೆಯಂತೆ ಶ್ರೀ ರೇವಣಸಿದ್ಧರು ಮುಕ್ತಿಯನ್ನು ದಯಪಾಲಿಸಿದರು. ಅಂದಿನಿಂದ ಶ್ರಾವಣದ ಮೂರನೆಯ ಸೋಮವಾರದಂದು ಹಂಚಿನಾಳ ಶರಣಬಸಪ್ಪನಿಗೆ ದರುಶನ ನೀಡಿ, ಉತ್ಸವವು ಶ್ರೀ ರೇವಣಸಿದ್ಧರ ದೇವಾಲಯಕ್ಕೆ ಮರಳುತ್ತದೆ.